ಭಾರತೇಂದು ಹರಿಶ್ಚಂದ್ರ
1850-85. ಪ್ರಸಿದ್ಧ ಹಿಂದೀ ಲೇಖಕರು ಹಿಂದೀ ಸಾಹಿತ್ಯ ಚರಿತ್ರೆಯಲ್ಲಿ ಭಾರತೇಂದು ಯುಗವೊಂದನ್ನು ನಿರ್ಮಿಸಿದ ಅಗ್ರಗಣ್ಯರು. ಹುಟ್ಟಿದ್ದು ಕಾಶಿಯ ಆಗರ್ಭ ಶ್ರೀಮಂತ ಅಗ್ರವಾಲ ವೈಶ್ಯಕುಲದಲ್ಲಿ ತಂದೆ ಗೋಪಾಲಚಂದ್. ಕಾಶಿಯ ಕ್ವೀನ್ಸ್ ಕಾಲೇಜಿನ ವಾಡ್ರ್ಸ್ ಸ್ಕೂಲಿನಲ್ಲಿ ಶಿಕ್ಷಣ ಪಡೆದರು.

	ಇವರು 15ನೆಯ ವಯಸ್ಸಿನವರಾಗಿದ್ದಾಗ ಇಡೀ ಕುಟುಂಬ ಜಗನ್ನಾಥ ಯಾತ್ರೆ ಕೈಗೊಂಡಿತು. ಆಗ ಭಾರತೇಂದು ಅವರಿಗೆ ಬಂಗಾಳದ ಸಾಹಿತ್ಯ-ಪ್ರವೃತ್ತಿಗಳ ಮತ್ತು ಗತಿ-ವಿಧಿಗಳ ಸ್ಥೂಲ ಪರಿಚಯವಾಯಿತು. ಆಗ ಬಂಗಾಳದಲ್ಲಿ ಸಾಹಿತ್ಯದ ಹೊಸ ಅಲೆ ಎದ್ದಿತ್ತು. ಸಾಮಾಜಿಕ ಕ್ರಾಂತಿಯ ಹೊಸಗಾಳಿ ಬೀಸಿತ್ತು. ಈ ನವಜಾಗೃತಿಯಿಂದ ಅತ್ಯಂತ ಪ್ರಭಾವಿತರಾದ ಭಾರತೇಂದು ಅಂಥದೇ ಕ್ರಾಂತಿಯನ್ನು ಹಿಂದಿಯಲ್ಲಿ ನಡೆಸುವ ಹಂಬಲ ಹೊತ್ತು ಮನೆಗೆ ಮರಳಿದರು. 17ನೆಯ ವಯಸ್ಸಿನಲ್ಲಿ ಕವಿ ವಚನಸುಧಾ ಎಂಬ ಪತ್ರಿಕೆಯನ್ನು ಹೊರಡಿಸಿದರು. ಮೊದಲು ಅದರಲ್ಲಿ ಕೇವಲ ಪ್ರಾಚೀನ ಕವಿಗಳ ಕವಿತೆಗಳು ಅಚ್ಚಾಗುತ್ತಿದ್ದು ಬಳಿಕ ಗದ್ಯದಲ್ಲಿ ಲೇಖನಗಳೂ ಪ್ರಕಟಗೊಂಡವು. ಭಾರತೇಂದು 1873ರಲ್ಲಿ ಹರಿಶ್ಚಂದ್ರ ಮ್ಯಾಗಜೀನ್ ಎಂಬ ಮತ್ತೊಂದು ಪತ್ರಿಕೆಯನ್ನು ಆರಂಭಿಸಿದರು. ತರುವಾಯ ಅದೇ ಪತ್ರಿಕೆಯನ್ನು ಹರಿಶ್ಚಂದ್ರ ಚಂದ್ರಿಕಾ ಎಂದು ಹೆಸರಿಸಲಾಯಿತು. ಇದರಿಂದ ಹಿಂದೀ ಸಾಹಿತ್ಯದ ಹೊಸಯುಗವೊಂದು ಆರಂಭವಾಯಿತು ಎನ್ನಬಹುದು.

	ಗದ್ಯರಚನೆಯಲ್ಲಿ ಭಾರತೇಂದು ಹರಿಶ್ಚಂದ್ರರ ಗಮನ ಮೊತ್ತ ಮೊದಲು ನಾಟಕದತ್ತ ಹರಿಯಿತು. ಇವರಿಗಿಂತ ಹಿಂದೆ ಮಹರಾಜ ವಿಶ್ವನಾಥಸಿಂಹರ ಆನಂದ ರಘುನಂದನ ನಾಟಕ ಹಾಗೂ ಎರಡನೆಯದಾಗಿ ಭಾರತೇಂದುವಿನ ತಂದೆ ಬಾಬೂ ಗೋಪಾಲ್‍ಚಂದ್ ಬರೆದ ನಹುಷ ನಾಟಕಗಳಿದ್ದುವು. ಇವೆರಡೂ ವಜ್ರಭಾಷೆಯಲ್ಲಿದ್ದವು. ಭಾರತೇಂದು ಹರಿಶ್ಚಂದ್ರರು ಒಟ್ಟು ಹದಿನೇಳು ನಾಟಕಗಳನ್ನು ಬರೆದಿದ್ದಾರೆ. ವಿದ್ಯಾಸುಂದರ, ರತ್ನಾವಳಿ, ಪಾಖಂಡವಿಡಂಗನ, ವೈದಿಕೀಹಿಂಸಾ ಹಿಂಸಾ ನ ಭವತಿ, ಧನಂಜಯ ವಿಜಯ, ಮುದ್ರಾರಾಕ್ಷಸ, ಸತ್ಯ ಹರಿಶ್ಚಂದ್ರ, ಪ್ರೇಮ ಜೋಗಿನಿ, ವಿಷಸ್ಯ ವಿಷಮೌ ಷಧಮ್, ಕರ್ಪೂರಮಂಜರಿ. ಚಂದ್ರಾವಳಿ, ಭಾರತ ದುರ್ದಶಾ, ಭಾರತ ಜನನಿ, ನೀಲದೇವಿ, ದುರ್ಲಭ ಬಂಧು, ಅಂಧೇರ ನಗರೀ ಮತ್ತು ಸತೀ ಪ್ರತಾಪ-ಇವೇ ಆ ಹದಿನೇಳು ನಾಟಕಗಳು. ಇವುಗಳಲ್ಲಿ ವಿದ್ಯಾಸುಂದರ ಬಂಗಾಳೀ ನಾಟಕವೊಂದರ ಅನುವಾದ. ರತ್ನಾವಳಿ, ಧನಂಜಯ ವಿಜಯ, ಮುದ್ರಾರಾಕ್ಷಸ ಇವು ಸಂಸ್ಕøತದಿಂದ ಹಿಂದಿಗೆ ಭಾಷಾಂತರಿಸಲ್ಪಟ್ಟ ನಾಟಕಗಳು. ಕರ್ಪೂರಮಂಜರಿ ಪ್ರಾಕೃತ ಕೃತಿಯೊಂದರ ಅನುವಾದ. ದುರ್ಲಭ ಬಂಧು ಇಂಗ್ಲಿಷ್ ನಾಟಕದ ಅನುವಾದ. ಉಳಿದವು ಸ್ವತಂತ್ರ ಕೃತಿಗಳು.

	ಭಾರತೇಂದು ಹರಿಶ್ಚಂದ್ರರು ತಮ್ಮ ನಾಟಕಗಳ ಮೂಲಕ ಹಿಂದಿಯಲಿ ಅದ್ಭುತ ಕ್ರಾಂತಿ ಮಾಡಿದರು. ಇವರನ್ನು ಹಿಂದೀ ಸಾಹಿತ್ಯದ ಆಧುನಿಕ ಯುಗದ ಹರಿಕಾರರೆಂದೂ ನವೋದಯದ ಶುಕ್ರರೆಂದೂ ಕರೆಯುತ್ತಾರೆ. ಭಾಷೆ ಮತ್ತು ಸಾಹಿತ್ಯ ಇವೆರಡಕ್ಕೂ ಹೊಸ ತಿರುವನ್ನು ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.

	ಇವರ ಚಂದ್ರಾವಳಿ ದಿವ್ಯ ಪ್ರೇಮವನ್ನು ಪ್ರತಿಪಾದಿಸುವ ಆತ್ಮ ಗೀತಾಂಜಲಿ. ನೀಲದೇವಿ ಪಂಜಾಬಿನ ಹಿಂದೂ ರಾಜನೊಬ್ಬನ ಮೇಲೆ ಮುಸಲ್ಮಾನರ ಆಕ್ರಮಣದ ಹಿನ್ನೆಲೆಯಲ್ಲಿ ಬರೆದ ನಾಟಕ. ಭಾರತ ದುರ್ದಶಾದಲ್ಲಿ ಭಾರತದ ಅಂದಿನ ಭೀಕರ ದುಃಸ್ಥತಿ ಅತ್ಯಂತ ಭಾವೋತ್ತೇಜಕವಾಗಿ ಚಿತ್ರಿಸಲ್ಪಟ್ಟಿದೆ. ವಿಷಸ್ಯ ವಿಷಮೌಷಧಮ್ ಎಂಬ ನಾಟಕದಲ್ಲಿ ದೇಶೀರಾಜರ ಅರಮನೆಯಲ್ಲಿ ನಡೆಯುವ ಪಿತೂರಿ, ಆಂಗ್ಲರ ಆಳ್ವಿಕೆಯ ನೊಗದಡಿಯಲ್ಲಿ ಸಿಲುಕಿ ನರಳುತ್ತಿರುವ ಭಾರತೀಯರ ದೈನ್ಯ, ಆಂಗ್ಲರ ದಬ್ಬಾಳಿಕೆ, ಜನತೆಯ ಅಜ್ಞಾನ ಮೊದಲಾದವುಗಳ ವ್ಯಂಗ್ಯಪೂರ್ಣ ಚಿತ್ರವಿದೆ. ಪಾಖಂಡ ವಿಡಂಬನ ಮತ್ತು ವೈದಿಕೀ ಹಿಂಸಾಹಿಂಸಾನ ಭವತಿ ಮೊದಲಾದ ನಾಟಕಗಳಲ್ಲಿ ಸಮಾಜದ ಅನಾರೋಗ್ಯಕ್ಕೆ ಕಾರಣವಾದ ಮೂಢನಂಬಿಕೆಗಳ ಮೇಲೆ ಪ್ರಹಾರ ಮಾಡಲಾಗಿದೆ. ಚಂದ್ರಾವಳಿ ಮತ್ತು ಪ್ರೇಮಜೋಗಿನಿ ಈ ಎರಡೂ ನಾಡಕಗಳು ಭರತನ ನಾಟ್ಯಶಾಸ್ತ್ರದ ನಿಯಾಮಾನುಸಾರ ರಚಿತವಾದ ಕೃತಿಗಳು. ಭಾರತ ದುರ್ದಶಾ ಮತ್ತು ಅಂಧೇರ ನಗರೀಯಂಥ ಕೃತಿಗಳಲ್ಲಿ ಸಾಮಾಜಿಕ ಪ್ರಜ್ಞೆಗೆ ಅಭಿವ್ಯಕ್ತಿ ನೀಡಲಾಗಿದೆ. ಇವರು ಕಾಶ್ಮೀರ ಕುಸುಮ, ಬಾದಶಾಹ ದರ್ಪಣ ಎಂಬ ಕೃತಿಗಳನ್ನು ರಚಿಸಿ ಇತಿಹಾಸ ಗ್ರಂಥಗಳಿಗೂ ಅಂಕುರಾರ್ಪಣೆ ಮಡಿದರು.

ಇವರು ಸ್ವಯಂ ನಟರಾಗಿದ್ದು ರಂಗಭೂಮಿಯ ಮೇಲೆ ಅಭಿನಯಿಸಿ ನಾಟಕಗಳನ್ನು ಪ್ರಚಾರ ಮಾಡಿದರು. ಸಂಸ್ಕøತ, ಬಂಗಾಳಿ, ಇಂಗ್ಲಿಷಿನಿಂದ ನಾಟಕಗಳನ್ನು ಹಿಂದಿಗೆ ಭಾಷಾಂತರಿಸಿ ಆಳವಡಿಸಿದರು. ಇವರು ರಾಷ್ಟ್ರೀಯ ಭಾವನೆಯ ಪ್ರಾಚಾರಕ್ಕಾಗಿ ನಾಟಕ ಸಶಕ್ತ ಮಾಧ್ಯಮ ಎಂದು ಭಾವಿಸಿದ್ದರು.								
(ವಿ.ಡಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ